Monday, November 30, 2009

ಸ್ವರತರಂಗ

ಈ ಸುಗಮ ಸಂಗೀತದ ಮೋಡಿಯೇ ಬೇರೆ... ಅದರಲ್ಲೂ ಅಶ್ವಥರಂತಹ ದಿಗ್ಗಜರ ರಾಗ ಸಂಯೋಜನೆ ಪ್ರತಿಯೊಬ್ಬ ಕೇಳುಗರಲ್ಲಿ ಭಾವೊತ್ಕರ್ಷವನ್ನು ಉಂಟು ಮಾಡುತ್ತದೆ. ಅದಕ್ಕೆ ನೆನ್ನೆ, ಅಂದರೆ ೨೯ ನವಂಬರ್ ನಡೆದ ಸ್ವರ ತರಂಗ ಕಾರ್ಯಕ್ರಮ ಸಾಕ್ಷಿ.

೭೦ ವರ್ಷಗಳು, ಅದರಲ್ಲಿ ಸರಿ ಸುಮಾರು ೪೦ - ೫೦ ವರ್ಷಗಳು ಸಂಗೀತದ ಮಧ್ಯದಲ್ಲಿ ತೇಲಿ ಹೋಗುವ ಪ್ರಕ್ರಿಯೆ ಇದೆಯಲ್ಲ, ಅದು ಊಹೆಗೂ ನಿಲುಕದ್ದು. ಈ ತೇಲಿ ಹೋಗುವಾಗಲೇ ಇತರರನ್ನೂ ತೇಲಿಸುವ ಪ್ರಕ್ರಿಯೆ ಇನ್ನಷ್ಟು ಕುತೂಹಲಕಾರಿ ಮತ್ತು ಶ್ಲಾಘನೀಯ. ಅಶ್ವಥ್ ಮಾಡಿದ್ದು ಅದನ್ನೇ.

ಈ ತೇಲಿ ಹೋದ ಮಂದಿಗೆ ಮತ್ತೆ ತೇಲುವ ಆಸೆ ಹುಟ್ಟಿಸಿದ್ದು ಈ ಸ್ವರ ತರಂಗ. ಪ್ರಕೃತಿ ಸಂಸ್ಥೆಯ ಎಂ ಎಸ್ ಪ್ರಸಾದ್ ಮತ್ತು ಪ್ರವೀಣ್ ರಾವ್ ಹಾಗು ಇನ್ನೋವೇಟಿವ್ ಐ ಸಂಸ್ಥೆಯ ಶ್ರೀನಾಥ್ ವಸಿಷ್ಠ ಮತ್ತು ರಮೇಶ್ ಪಂಡಿತ ಇವರ ಕನಸಿನ ಕೂಸು ಈ ಸ್ವರ ತರಂಗ. ಈ ರೀತಿಯ ಕಾರ್ಯಕ್ರಮ ಮಾಡುವುದು, ನಾವು ನೋಡಿ ಸಂತೋಷ ಪಟ್ಟಷ್ಟು ಸುಲಭವಲ್ಲ.. ತಿಂಗಳುಗಳಿಂದ cycle ಹೊಡೆದು ಕಾರ್ಯಕ್ರಮಕ್ಕೆ ರೂಪು ರೇಷೆ ಕೊಟ್ಟ ಈ ನಾಲ್ಕು ಮಂದಿ ಅಭಿನಂದನಾರ್ಹರು.


ಅಶ್ವತ್ಥರ ಹಾಡುಗಳ ಮಾಯೆಗೆ ಸಿಲುಕಲೆಂದೇ ಬಂದಿದ್ದ ಅಪಾರ ಜನ ಸಾಗರ ಇನ್ನೂ ಕಣ್ಣಿಗೆ ಕಟ್ಟಿದಂತಿದೆ..... ಮಾಯಾಜಾಲ ಅಂದರೆ ಇದೇನಾ?


ಕಾರ್ಯಕ್ರಮ ಆರಂಭ ಆಗಿದ್ದೇ ಅದ್ಭುತ ರೀತಿಯಲ್ಲಿ. ಸಿ ಅಶ್ವತ್ಥರನ್ನು ಸಾರೋಟಿನಲ್ಲಿ ಕೂಡಿಸಿ ರಾಮಕೃಷ್ಣ ಆಶ್ರಮದ ಮುಂದಿನಿಂದ ದೊಡ್ಡ ಗಣೇಶನ ದೇವಸ್ಥಾನದ ಮುಂದೆ ನಿಲ್ಲಿಸಿ, ಪೂಜೆ ಸಲ್ಲಿಸಿ ನಂತರ ಎ ಪಿ ಎಸ್ ಕಾಲೇಜು ಮೈದಾನದವರೆಗೆ ಮೆರವಣಿಗೆ ಮಾಡಲಾಯಿತು. ನನ್ನ ಅದೃಷ್ಟಕ್ಕೆ ಅಶ್ವತ್ಥರ ಮನೆಯಿಂದ ರಾಮಕೃಷ್ಣ ಆಶ್ರಮದವರೆಗೂ ಅವರನ್ನು ಕರೆತಂದ ಭಾಗ್ಯ ನನ್ನದಾಗಿತ್ತು. ಜೊತೆಗೆ ಗಾರುಡಿ ಗೊಂಬೆ, ಡೊಳ್ಳು ಕುಣಿತ, ವೀರಗಾಸೆ ನೃತ್ಯ ಮೆರವಣಿಗೆಗೆ ಹಬ್ಬದ ವಾತಾವರಣ ತಂದಿತ್ತು. ಸಿ ಅಶ್ವತ್ಥರು ತುಂಬಾ ಖುಷಿಯಲ್ಲಿದ್ದದ್ದು ಕಂಡು ನಮಗೆಲ್ಲಾ ಧನ್ಯತಾ ಭಾವ ಮೂಡಿತ್ತು. ಅಷ್ಟು ಹೊತ್ತಿಗಾಗಲೇ ಪ್ರವೀಣ್ ಡಿ ರಾವ್ ಮತ್ತು ಬಿ ವಿ ಶ್ರೀನಿವಾಸ್ ಕಲಾವಿದರನ್ನು ಒಟ್ಟಿಗೆ ಕಲೆ ಹಾಕಿ ಒಂದೇ wave legth ಗೆ ಬಂದು ನಿಲ್ಲುವಂತೆ ಮಾಡಿದ್ದರು.

ಅಶ್ವಥರೊಟ್ಟಿಗೆ ದುಡಿದ ಕಲಾವಿದರು, ನಿರ್ದೇಶಕರು, ಹಿರಿಯ ಸಾಹಿತಿಗಳು, ಎಲ್ಲರೂ ಅಲ್ಲಿ ಸೇರಿದ್ದರು. ಮಾಸ್ಟರ್ ಹಿರಣ್ಣಯ್ಯ, ಎ ಎಸ್ ಮೂರ್ತಿ, ಟಿ ಎನ್ ಸೀತಾರಾಂ, ಬಿ ಆರ್ ಲಕ್ಷ್ಮಣ ರಾವ್ , ಎಂ ಎನ್ ವ್ಯಾಸರಾವ್, ಸಿಹಿಕಹಿ ಚಂದ್ರು, ರಂಗಭೂಮಿಯ ಗೆಳೆಯರಾದ ವೆಂಕಟರಾವ್, ಪ್ರಭಾಕರ್, ಶೋಭಾ ರಾಘವೇಂದ್ರ, ಗೌರಿ ದತ್ತು, ಗಿರಿಜಾ ಲೋಕೇಶ್, ಬಾಬು ಹಿರಣ್ಣಯ್ಯ, ....... ಹೀಗೆ, ಹಲವಾರು ಹಿರಿಯ, ಕಿರಿಯ ಕಲಾವಿದರು ಅಲ್ಲಿದ್ದರು. ಎಲ್ಲರ ಮನದಲ್ಲೂ ಧನ್ಯತಾ ಭಾವ.


ಕಾರ್ಯಕ್ರಮ ಎಂದಿನಂತೆ ನಾಡಗೀತೆಯೊಂದಿಗೆ ಆರಂಭ. ಅಶ್ವಥರು ವೇದಿಕೆಗೆ ಬರುತ್ತಿದ್ದಂತೆ ಜನಸ್ತೋಮದಲ್ಲಿ ಉಂಟಾದ ಭಾವೋದ್ವೇಗವನ್ನು ಬಣ್ಣಿಸುವುದಕ್ಕಿಂತ ಅದನ್ನು ಸವಿದ ನಾವು ಅದೃಷ್ಟವಂತರು. ಯಾವುದೇ ಕಲಾವಿದನಿಗೆ ಈ ರೀತಿಯ ಜನಸಾಗರದಿಂದ, ಭಾವೊತ್ಕರ್ಷ ಸಂವಾದಕ್ಕಿಂತ ಬೇರೆ ಏನು ಬೇಕು?
ವೇದಿಕೆಯ ಮೇಲೆ ಸಂಗೀತ ಕಟ್ಟಿ "ಮುಗಿಲ ಮಾರಿಗೆ ರಾಗ ರತಿಯ ನಂಜ ಏರಿತ್ತ, ಆಗ ಸಂಜಿಯಾಗಿತ್ತ" ಹಾಡಿದಾಗ, ಸಂಜೆಗೆ ಬಂದ ರಂಗಿನ ಪರಿಯೇ ಬೇರೆ.


ನಂತರ ಶುರುವಾಯಿತು ನೋಡಿ ಪ್ರವಾಹ...... ಅಬ್ಬಾ... ಜನಕ್ಕೆ ಕೊಚ್ಚಿ ಹೋಗುವುದರಲ್ಲಿಯೂ ಈ ಮಜಾ ಇದೆ ಎಂದು ಮರು ಮನವರಿಕೆಯಾದದ್ದೇ ತಡ, ಅದ್ಭುತ ವಾತಾವರಣ ಸೃಷ್ಟಿಯಾಯಿತು. ವೇದಿಕೆಯ ಮೇಲೆ ಇದ್ದ ವಾದ್ಯವೃಂದ, ಹಾಡುವವರೊಂದಿಗೆ ಮಾಯಾಜಾಲ ಹೆಣೆಯುತ್ತಾ ಹೋಯಿತು. ಅದರಲ್ಲೂ ೧೦ ವಯೊಲಿನ್ ಗಳ ಆ ಮೋಡಿ ಇತ್ತಲ್ಲಾ, ಅದನ್ನು ಯಾವುದೇ ಶಬ್ಧಗಳಲ್ಲಿ ಹಿಡಿದಿಡುವುದು ತುಂಬಾ ಕಷ್ಟಕರವಾದ ಕೆಲಸ. ಸಂಗೀತದಲ್ಲಿ richness ಅನ್ನುವ ಭಾವವೇನಿದೆ ಆ ಭಾವವನ್ನು ಸೃಷ್ಟಿಸಿಕೊಟ್ಟಿದ್ದು ಆ ವಯೊಲಿನ್ ಗಳ ಜೊತೆ ಎನ್ ಎಸ್ ಪ್ರಸಾದ್ (ಮ್ಯಾಂಡೊಲಿನ್), ವೇಣುಗೋಪಾಲ ರಾಜು, ಜಗದೀಶ್ (ತಬಲಾ) ಅವರಂಥಹ ಅದ್ಭುತ ಕಲಾವಿದರು. ಅಷ್ಟೊಂದು ಕಲಾವಿದರ ಕುಸುರಿ ಕೆಲಸವನ್ನು handle ಮಾಡಿದ ರೀತಿ ಇತ್ತಲ್ಲ, ಅದೊಂದು ವಿಶಿಷ್ಟವಾದ ಕಟ್ಟಿಕೊಡುವ ಕೆಲಸ. ಆ ಕೆಲಸದಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದು ಬಿ ವಿ ಶ್ರೀನಿವಾಸ್ ಮತ್ತು ಪ್ರವೀಣ್ ರಾವ್ ಜೋಡಿ. ಹಾಡಿದ ಕಲಾವಿದರೇನು ಕಡಿಮೆಯಿರಲಿಲ್ಲ. ಸುಪ್ರಿಯಾ ರಘುನಂದನ್, ಎಂ ಡಿ ಪಲ್ಲವಿ, ಸುನಿತಾ, ಸಂಗೀತಾ ಕುಲಕರ್ಣಿ, ಮಂಗಳಾ ರವಿ, ರವಿ ಮುರೂರು, ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ವಿನಯ್ ಕುಮಾರ್, ಇವರೆಲ್ಲರನ್ನು ಹುರಿದುಂಬಿಸುತ್ತಾ ವೇದಿಕೆಯ ಮೇಲೆ ಚಿಕ್ಕ ಮಕ್ಕಳಂತೆ ಕುಣಿದು ಕುಪ್ಪಳಿಸಿದ್ದು ಅದೇ ಸಿ ಅಶ್ವಥ್. ಸುಪ್ರಿಯಾ ಹಾಡಿದ ಬಿ ಆರ್ ಲಕ್ಷ್ಮಣ ರಾಯರ "ಅಮ್ಮಾ ನಿನ್ನ ಎದೆಯಾಳದಲ್ಲಿ" ಕೇಳುತ್ತಿದ್ದವರ ಕಣ್ಣಂಚಿನಲ್ಲಿ ನೀರು ತರಿಸಿದ್ದು ಸುಳ್ಳಲ್ಲ. ಪಲ್ಲವಿ ಹಾಡಿದ "ನನ್ನ ಇನಿಯನ ನೆಲೆಯ ಬಲ್ಲೆಯೇನೆ" ಗೀತೆ "ಮಾಷಾ ಅಲ್ಲಾಹ್". ಮಂಗಳಾ ರವಿ ಹಾಡಿದ "ಎದೆಯು ಮರಳಿ ತೊಳಲುತಿದೆ....." ಮಾಡಿದ ಮಾಯೆ ಕೂಡ ಅದ್ಭುತ. ಇದೆಲ್ಲಾ ಕೇವಲ ನೆಲದಡಿಯ ವಿಸ್ತಾರವಾದ ಕಲ್ಲಿನ ತುದಿ ನೆಲದ ಮೇಲೆ ಕಾಣಿಸುವಂತೆ ಅಷ್ಟೇ.


ಹಾಡಿದ ಪ್ರತಿಯೊಂದು ಹಾಡಿಗೂ ಅಲ್ಲಿದ್ದ ಮಂದಿ ತಮ್ಮ ತಮ್ಮ ನೋವು, ನಲಿವು, ಪ್ರೀತಿ, ಪ್ರೇಮ, ಪ್ರಣಯ, ವಿರಹ, ಏಕಾಂತ, ಹೀಗೆ ವಿಭಿನ್ನ ಭಾವಗಳಿಗೆ ಒಂದು ಆಳವಾದ visit ಕೊಟ್ಟಿದ್ದು ಮಾತ್ರ ಸತ್ಯದಲ್ಲಿ ಸತ್ಯ... ಅಶ್ವಥ್ ಅವರೇ ಹಾಡಿದ ಹಾಡುಗಳಂತೂ ಇನ್ನೂ ಅದ್ಭುತ. ಜನ ತಮ್ಮಲ್ಲೇ ತಮ್ಮ "ಗುಪ್ತ ಗಾಮಿನಿ" ಯಾದ ಭಾವಗಳಿಗೆ ಒಂದು ಭೇಟಿ ಕೊಡುವಂತೆ ಮಾಡಿದ್ದು, ಅಶ್ವಥ್ ಅವರ ಹೆಗ್ಗಳಿಕೆ... ಅವರೇ ಹಾಡಿದ "ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಒಳಗೊಳಗೇ ಹರಿಯುವವಳು, ಜೀವ ಹಿಂಡಿ ಹಿಪ್ಪೆ ಮಾಡಿ, ಒಳಗೊಳಗೇ ಕೊರೆಯುವವಳು, ಸದಾ ಗುಪ್ತಗಾಮಿನಿ, ನನ್ನ ಶಾಲ್ಮಲ...." ಚಂದ್ರಶೇಖರ ಪಾಟೀಲರ ಈ ಹಾಡಿನ ಸಾಲು ಅಲ್ಲಿದ್ದ ಕೇಳುಗರ ಮನಸ್ಥಿತಿಗೆ ಕನ್ನಡಿಯಾಗಿದ್ದು ವಿಶಿಷ್ಟವಾಗಿತ್ತು. ಕಾರ್ಯಕ್ರಮ ಕೊನೆಗೊಂಡಿದ್ದು ಅಶ್ವಥ್ ಅವರ ಶಿಶುನಾಳ
ಶರೀಫರ ಅನುಭಾವಿ ಗೀತೆಗಳೊಂದಿಗೆ.


ಇದಕ್ಕೆಲ್ಲಾ ಮೆರುಗು ನೀಡಿದ್ದು ಬಂದ ಅತಿಥಿಗಳಿಗೆಲ್ಲಾ ದೇಸಿ ತಳಿ ಸಸಿಗಳನ್ನು ನೀಡಿ ಮತ್ತು ವಾದ್ಯವೃಂದದ ಕಲಾವಿದರಿಗೆ ಕೂಡ ಸಸಿಗಳನ್ನು ನೀಡಿ ಗೌರವಿಸಿದ್ದು.


ಬಂದಿದ್ದ ಸಹಸ್ರಾರು ಮಂದಿ ತಮ್ಮ ಮನೆಗೆ ಸಸಿಗಳನ್ನು ತೆಗೆದುಕೊಂಡು ಹೋಗಿದ್ದು, ಚಿಕ್ಕ ಮಕ್ಕಳು ಸಸಿಗಳನ್ನು ತೆಗೆದುಕೊಂಡು ಖುಷಿಯಿಂದ ಮನೆಗೆ ಮರಳುತ್ತಿದ್ದು ಕಂಡು ಕೆಲವು ಕ್ಷಣ ನಾನು ಭಾವುಕನಾಗಿದ್ದು ಸುಳ್ಳಲ್ಲ.

ಒಟ್ಟಾರೆ ಯಾವತ್ತೂ ಮರೆಯದಂಥ ಹಾಡುಗಳು, ಅದ್ಭುತವಾದ ವಾದ್ಯವೃಂದ, ನೆರೆದ ೧೦,೦೦೦ ಕ್ಕೂ ಹೆಚ್ಚು ಮಂದಿ ಪಟ್ಟ ಸಂತೋಷ, ಭಾವೋದ್ವೇಗ, ಇದನ್ನೆಲ್ಲಾ ಸಾಧ್ಯವಾಗಿಸಿದ ಎಲ್ಲಾ ಕಲಾವಿದರೂ, ಮತ್ತು ಇದಿಷ್ಟನ್ನು ಹೆಗಲ ಮೇಲೆ ಹೊತ್ತ ಪ್ರಕೃತಿ ಮತ್ತು ಇನ್ನೋವೇಟಿವ್ ಐ ಸಂಸ್ಥೆ ಎಲ್ಲಾ ಒಟ್ಟಿಗೆ ಕೂಡಿ, ಉಂಟಾದ "ತರಂಗಗಳು" ಯಾವತ್ತಿಗೂ ಮರೆಯುವಂಥದ್ದಲ್ಲ.

No comments:

Post a Comment