ಯಾವುದೇ ಒಬ್ಬ ನಟ ಅಥವ ನಟಿಯ ಬಗ್ಗೆ ಅಂತರ್ಜಾಲ ಪ್ರಪಂಚದಲ್ಲಿ ಹುಡುಕಬೇಕು ಅಂದ್ರೆ, ನೂರಾರು ಪುಟಗಳು ಪರದೆಯ ಮೇಲೆ ಧೊಪ್ಪೆಂದು ಬಂದು ಬೀಳುತ್ತವೆ. ಕನ್ನಡ ಸಾಹಿತ್ಯ ಲೋಕ ಕಂಡ ಅತ್ಯದ್ಭುತ ಕಥೆಗಾರ ರಾಘವೇಂದ್ರ ಖಾಸನೀಸರ ಹೆಸರಿನ ಮೇಲೆ ಹುಡುಕಿದಾಗ, ಧೊಪ್ಪೆಂದು ಬೀಳದೆ ಕಷ್ಟ ಪಟ್ಟು ತೆರೆಯ ಮೇಲೆ ನುಸುಳಿ ಬಂದದ್ದು ಕೇವಲ ಬೆರಳೆಣಿಕೆಯಷ್ಟು ಪುಟಗಳು. ಇಂದಿನ benchmark ಪ್ರಕಾರ ಈ ಪರಿ 2 - 3 ಫಲಿತಾಂಶಗಳು ಖೇದಕರವೇ. ಖಾಸನೀಸರ ಕಥೆಗಳಲ್ಲಿ ಮಾತ್ರ ವಿಷಾದ ಅಡಗಿದೆ ಎಂದರೆ ಅದು ಸುಳ್ಳು ಮಾತಾಯಿತು. ಅವರನ್ನು ಗುರುತಿಸದ ನಮ್ಮ ಕನ್ನಡ ಸಾಹಿತ್ಯ ಲೋಕದ ದಿವ್ಯ ನಿರ್ಲಕ್ಷ್ಯದ ಬಗ್ಗೆ ಕೂಡ ವಿಷಾದವೇ... ಹೀಗೆ ಖಾಸನೀಸರ ಬದುಕು, ಬರಹ, ಅವರ ಬದುಕಿನ ನಂತರ ಅವರ ಬಗ್ಗೆ ಬರಹ... ಎಲ್ಲ ಕಡೆ ವಿಷಾದ, ಸಂಕಟ.
ಇಷ್ಟಾಗಿ ನನಗೂ ಕೂಡ ಅವರ ಹೆಸರು ಪರಿಚಯವಿತ್ತೆ ವಿನಃ, ಅವರ ಕಥೆಗಳಲ್ಲಿ ಓದಿದ್ದು ಮೊನಾಲಿಸ ಮಾತ್ರವೇ... ವ್ಯಾಸರಂಥ ಕಥೆಗಾರರ ಸಾಲಿನಲ್ಲಿ ನಿಲ್ಲುವವರು ಗುಬ್ಬಿ ದೇಹದ ದೈತ್ಯ ಪ್ರತಿಭೆ ರಾಘವೇಂದ್ರ ಖಾಸನೀಸರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿ ಸರಿಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಖಾಸನೀಸರು, ವಿಶ್ವೇಶ್ವರ ಭಟ್ಟರು ಅವರ ಮುನ್ನುಡಿಯಲ್ಲಿ ಹೇಳುವಂತೆ "ಮಹಾ ಮೌನಿ...... ತನ್ನ ಕಥೆಗಳ ಮೂಲಕ ಅಲ್ಲದೆ ಮತ್ತೊಂದು ರೀತಿಯಲ್ಲಿ ಪ್ರಕಟಗೊಳ್ಳಲಾರೆ ಅಂದು ಪಟ್ಟು ಹಿಡಿದು ಕೂತವರು".
ಪ್ರಿಸಂ ಬುಕ್ಸ್ ತನ್ನ ಕಥಾ ಮಾಲಿಕೆಯ ಸಾಲಿನಲ್ಲಿ ಹೊರ ತಂದ "ರಾಘವೇಂದ್ರ ಖಾಸನೀಸರ ಸಮಗ್ರ ಕಥೆಗಳು" ಕೇವಲ 9 ಕಥೆಗಳಿದ್ದರೂ, ಪ್ರತಿಯೊಂದು ಕಥೆ ನಮ್ಮನ್ನು ಅದರ ಪಾತ್ರಗಳಿಗೆ ಹೋಲಿಸಿ ನೋಡಿಕೊಳ್ಳುವಂತೆ ಮಾಡುವ ತಾಕತ್ತು ಹೊಂದಿದೆ. ಇಷ್ಟಾಗಿ ಖಾಸನೀಸರು ಬರೆದದ್ದು ಸುಮಾರು 25 ಕಥೆಗಳು. ಸಾಹಿತ್ಯ ಲೋಕದ ಅಂಕಿ ಅಂಶಗಳನ್ನು ನೋಡಿದರೆ ಅದರ ಮಾನದಂಡದ ಪ್ರಕಾರ ಇದು ಕಡಿಮೆಯೇ. ಖಾಸನೀಸರ ಅಷ್ಟೂ ಕಥೆಗಳು ಅಮೂಲ್ಯವಾದ ಗಟ್ಟಿಗಳೇ. ಪ್ರತಿಯೊಂದು ಕಥೆ ಕೂಡ ಜನ್ಮ-ಜನ್ಮಾಂತರಕ್ಕಾಗುವಷ್ಟು ಛಾಯೆಗಳನ್ನು ಉಳಿಸಿಬಿಡುತ್ತವೆ.
ಖಾಸನೀಸರಿಗೂ ರೈಲ್ವೆ ನಿಲ್ದಾಣಕ್ಕೂ ಅದೇನು ಸಂಬಂಧವೋ.... ಪ್ರಿಸಂ ಕಥಾ ಮಾಲಿಕೆಯ ಸಮಗ್ರ ಕಥೆಗಳಲ್ಲಿ "ಮಂದಿಯ ರಹಸ್ಯ" "ಅಪಘಾತ" "ಹೀಗೂ ಇರಬಹುದು" "ಅಲ್ಲಾ ಉದ್ದೀನನ ಅದ್ಭುತ ದೀಪ" ಹೀಗೆ ಅವರ ಸುಮಾರು ಕಥೆಗಳು ಆರಂಭವಾಗುವುದೇ ರೈಲ್ವೆ ಹಳಿಗಳ ಮೇಲೆ, ನಿರ್ಜನವಾದ ರೈಲ್ವೆ ನಿಲ್ದಾಣಗಳ ಮೇಲೆ.. ಓಡುವ ರೈಲು, ಓಡುವ ಶಕ್ತಿಯನ್ನು ಕೆಲ ಕಾಲ ಹಿಡಿದಿಟ್ಟುಕೊಳ್ಳುವ ರೈಲ್ವೆ ನಿಲ್ದಾಣಗಳು ಇವುಗಳನ್ನೆಲ್ಲ ಅರ್ಥೈಸುವುದು ನನ್ನ ಮಟ್ಟಿಗೆ ಕೊಂಚ ಕಷ್ಟವೇ...
ಮಂದಿಯ ರಹಸ್ಯ ಕಥೆಯಲ್ಲಿ ಹೆಣ್ಣಿನ ಮನಸ್ಸಿನ ಹೊಯ್ದಾಟ ತುಯ್ದಾಟಗಳನ್ನು ಸಣ್ಣ ಕಥೆಗಳಲ್ಲಿ ಇಷ್ಟೊಂದು ಸೂಕ್ಷ್ಮವಾಗಿ ತಂದದ್ದು ಖಾಸನೀಸರ ಶಕ್ತಿಯೇ. ಓಡುವ ರೈಲು, ನಿರ್ಜನ ರೈಲು ನಿಲ್ದಾಣ, ಮಂದಾಕಿನಿಯ ಬದುಕಿನೊಂದಿಗೆ ಥಳುಕು ಹಾಕಿಕೊಳ್ಳುತ್ತವೆ. ಕಥೆಯ ಆರಂಭ ರೈಲಿನ ಸಿಗ್ನಲ್ ನೊಂದಿಗೆ ಪ್ರಾರಂಭವಾಗಿ, ಕೊನೆಯಾಗುವುದು ವಿಶಾದಕರವಾಗಿಯೇ. "ಸಾಸವಾಡದ ಹಸಿರು ಕೆಂಪಾಗುವ ದೀಪಗಳು ಕನಸಿನಲ್ಲಿ ಅಣಕಿಸಿ ಹೋಗುತ್ತಿದ್ದವು. ಗೋಳಗುಮ್ಮಟದ ಬಸಿರಲ್ಲಿ ಹುಟ್ಟಿ ಸಾಯುವ ದನಿಗಳು ಹೇಳುತ್ತಿದ್ದವು: "ಕಂಡ ಗಂಡೆಲ್ಲ ಮದುವೆಯಾಗುತ್ತೇವೆಂದು ಬರೆದು ಕೊಡಬೇಕೇ ? ಆಕಾಂಕ್ಷೆ ನಿನ್ನದು, ಅದಕ್ಕಾಗಿ ನೀನೇ ಅನುಭೋಗಿಸಬೇಕು". ಗೋಳಗುಮ್ಮಟದಲ್ಲಿ ದನಿ ಒಂದಕ್ಕೆ ಹತ್ತಾದರೆ ಆ ತಪ್ಪು ಅದರದೇ ವಿನಾ ಮಾತಾಡಿದವನದಲ್ಲ"
ಖಾಸನೀಸರ ಕಥೆಗಳಲ್ಲಿ ಮನುಷ್ಯ ಮನಸ್ಸುಗಳ ನಡುವಣ ತಿಕ್ಕಾಟ ತೊಳಲಾಟ ಎದ್ದು ಕಾಣುತ್ತದೆ... ಅದು "ಅಪಘಾತ" ಆಗಿರಬಹುದು ಅಥವಾ "ಪುರುಷನ ಮುಂದೆ ಮಾಯೆ" ಕಥೆಯಲ್ಲಿ ಬರುವ ರಾಮಬಾವು ರತ್ನಪಾರಖಿ ಆಗಿರಬಹುದು. ಯಾವತ್ತಿಗೂ ಇರುವ ದ್ವಂದ್ವಗಳು, ನೋವುಗಳು, ರಪ್ಪನೆ ಬೀಸುತ್ತವೆ... ನಮ್ಮನ್ನು ಮತ್ತೆ ಮತ್ತೆ ನಮ್ಮ ಅಸ್ತಿತ್ವದ ಬಗ್ಗೆ, ನಮ್ಮ ವ್ಯವಸ್ಥೆಯ ಬಗ್ಗೆ ಯೋಚನೆ ಮಾಡುವಂತೆ ಮಾಡುತ್ತವೆ. ಅದಕ್ಕೆ ಮೊದಲೇ ಹೇಳಿದ್ದು. ಪ್ರತಿಯೊಂದು ಕಥೆ ನಮ್ಮನ್ನು ಅದರ ಪಾತ್ರಗಳಿಗೆ ಹೋಲಿಸಿ ನೋಡಿಕೊಳ್ಳುವಂತೆ ಮಾಡುವ ತಾಕತ್ತು ಹೊಂದಿದೆ ಎಂದು.
ವೃದ್ಧಾಪ್ಯದ ಬಗೆಗೆ ಖಾಸನೀಸರು "ಪುರುಷನ ಮುಂದೆ ಮಾಯೆ" ಕಥೆಯಲ್ಲಿ ಮಾತನಾಡುತ್ತಾರೆ. ಒಂದು ಕುಟುಂಬದಲ್ಲಿ ತಂದೆ ತಾಯಿ ಮಗ ಮಗಳು ಈ ನಾಲ್ಕು ಮಂದಿಯ ನಾಲ್ಕು ದಿಕ್ಕುಗಳ ಹೊಯ್ದಾಟವನ್ನು ಎದ್ದು ಕಾಣುವಂತೆ ನಮಗೆ "ಅಶ್ವಾರೋಹಿ" ಕಥೆಯಲ್ಲಿ ಕಟ್ಟಿ ಕೊಡುತ್ತಾರೆ.... ಅದೇ ಖಾಸನೀಸರ ತಾಕತ್ತು... ವಿಷಾದವೆಂದರೆ... ಕಥೆಗಳು ಸುಖಾಂತವಾದಂತೆ ಕಂಡರೂ, ಒಳಗೆ, ಕಹಿ ಹಾಗೇ ಉಳಿದುಬಿಡುತ್ತದೆ. ಓದಿ ಮುಗಿಸಿದ ನಂತರವೂ ನಮ್ಮನ್ನು ವಿಪರೀತ ಕಾಡುವ ಪಾತ್ರಗಳೊಂದಿಗೆ ನಮ್ಮನ್ನು ತೇಲಿ ಬಿಡುತ್ತಾರೆ ಖಾಸನೀಸರು.... ವಿಷಾದವೂ ಒಂದು ಭಾವ... ಅದರೊಂದಿಗೆ ಬದುಕಲೇಬೇಕಾದ ಅನಿವಾರ್ಯತೆಯನ್ನು ಖಾಸನೀಸರ ಕಥೆಗಳು ನಮ್ಮ ಮನಸ್ಸಿನ ಎಲ್ಲ ಕಡೆ ಹರಡಿ ಕಾಡುತ್ತವೆ... ಇದಿಷ್ಟೇ ಸಾಕು ಈ ಕಥೆಗಳ ಶಕ್ತಿಯನ್ನು ಕಾಣುವುದಕ್ಕೆ.